ಕೊಲ್ಲಂ : ಭೀಕರ ಅಗ್ನಿ ದುರಂತಕ್ಕೀಡಾಗಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಕೊಲ್ಲಂನ ಪರವೂರ್ ಪುಟ್ಟಿಂಗಲ್ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು.
ದೆಹಲಿಯಿಂದ ಹೆಸರಾಂತ ಆಸ್ಪತ್ರೆಯ 15 ಮಂದಿ ತಜ್ಞ ವೈದ್ಯರೊಂದಿಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕೊಲ್ಲಂಗೆ ತೆರಳಿದರು. ಮೋದಿ ಅವರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿದ್ದರು.
ಪ್ರಧಾನಿ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ , ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ , ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದರು. ಇದೇ ವೇಳೆ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಿರುವನಂತಪುರಂನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿದರು.
ಪುಟ್ಟಿಂಗಲ್ ಮೂಕಾಂಬಿಕ ದೇವಾಲಯದಲ್ಲಿ ನಡೆದ ಅಗ್ನಿ ದುರಂತದಲ್ಲಿ ಇದುವರೆಗೆ ಒಟ್ಟು 109 ಮಂದಿ ಸಾವನ್ನಪ್ಪಿದ್ದು, 380ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.