ಅಹಮದಾಬಾದ್ : ಆನಂದಿ ಬೆನ್ ರಿಂದ ತೆರವಾದ ಗುಜರಾತ್ ಸಿಎಂ ಸ್ಥಾನಕ್ಕೆ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗಾಂಧಿನಗರದ ಮಹತ್ಮಾ ಮಂದಿರದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಒ.ಪಿ.ಕೊಹ್ಲಿ ಅವರು ಮುಖ್ಯಮಂತ್ರಿ ವಿಜಯ್ ರೂಪಾಣಿ ಹಾಗೂ 24 ಸಚಿವರು ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಆನಂದಿ ಬೆನ್ ತಂಡದಲ್ಲಿದ್ದ 9 ಮಂದಿ ಸಚಿವರನ್ನು ಕೈಬಿಡಲಾಗಿದ್ದು, 9 ಹೊಸ ಶಾಸಕರಿಗೆ ಸಚಿವರಾಗಿ ಭಡ್ತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
70 ವರ್ಷ ವಯಸ್ಸಾದವರು ಅಧಿಕಾರ ಬಿಟ್ಟುಕೊಡಬೇಕೆನ್ನುವ ನೀತಿಯ ಹಿನ್ನೆಲೆಯಲ್ಲಿ ಆನಂದಿಬೆನ್ ಸಿಎಂ ಸ್ಥಾನಕ್ಕೆ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಸಿಎಂ ಸ್ಥಾನ ತೆರವಾಗಿತ್ತು.
ಪ್ರಮುಖವಾಗಿ ಮಾಜಿ ಸಿಎಂ ಆನಂದಿಬೆನ್ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಸೌರಭ್ ಪಟೇಲ್, ರಮಣ್ ವೋಹ್ರಾ, ರಜಿನಿ ಪಟೇಲ್ ಸೇರಿದಂತೆ 9ಸಚಿವರುಗಳನ್ನು ಸಂಪುಟದಿಂದ ಕೈಬಿಡಲಾಗಿದೆ.