ನವದೆಹಲಿ : ಇತ್ತೀಚೆಗಷ್ಟೇ ದೇಶದ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಖಾತೆ ನೀಡುತ್ತಿರುವ ಜನ್-ಧನ್ ಯೋಜನೆ ನಂತರ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಂದು ಮಹತ್ವದ ಯೋಜನೆಗೆ ತಯಾರಿ ನಡೆಸಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸೈಬರ್ ಸ್ಪೇಸ್ ನೀಡುವುದು ಮೋದಿ ಅವರ ಹೊಸ ಯೋಜನೆಯ ಉದ್ದೇಶವಾಗಿದೆ.
ಪ್ರತಿಯೊಬ್ಬ ನಾಗರಿಕನಿಗೂ ಯುನೀಕ್ ಡಿಜಿಟಲ್ ಕ್ಲೌಡ್(unique digital cloud) ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಹ ಖಾಸಗಿ ವಿವರಗಳನ್ನು ಈ ಸೈಬರ್ ಸ್ಪೇಸ್ ನಲ್ಲಿ ಸಂಗ್ರಹಿಸಬಹುದಾಗಿದೆ. ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ, ಪಾಸ್ ಪೋರ್ಟ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ವಿವರಗಳನ್ನು ಕೇಂದ್ರ ಸರ್ಕಾರ ನೀಡುವ ಸೈಬರ್ ಸ್ಪೇಸ್ ನಲ್ಲಿ ಸಂಗ್ರಹಿಸಿಡಬಹುದಾಗಿದೆ.
ಯಾವುದೇ ಪದವೀಧರ ಸರ್ಕಾರಿ ನೌಕರಿಗೆ ಅರ್ಜಿ ಹಾಕಿದರೆ ಸರ್ಕಾರಕ್ಕೆ ಆ ವ್ಯಕ್ತಿಯ ವಿದ್ಯಾರ್ಹತೆ, ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ ವಿವರಗಳನ್ನು ಪರಿಶೀಲನೆ ನಡೆಸಲು ಸೈಬರ್ ಸ್ಪೇಸ್ ಯೋಜನೆ ನೆರವಾಗಲಿದೆ ಎಂದು ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ. ಸೈಬರ್ ಸ್ಪೇಸ್ ನಲ್ಲಿ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಸರ್ಕಾರ ಯಾವಾಗಬೇಕಾದರು ಪರಿಶೀಲನೆ ನಡೆಸಬಹುದಾಗಿದ್ದು ಪೇಪರ್ ದಾಖಲೆಗಳ ಪರಿಶೀಲನೆ ಕೆಲಸಕ್ಕೆ ಬ್ರೇಕ್ ಬೀಳಲಿರುವುದು ಈ ಯೋಜನೆಯ ಮತ್ತೊಂದು ವಿಶೇಷಯತೆಯಾಗಿದೆ.
ಡಿಜಿಟಲ್ ಕ್ಲೌಡ್ ಯೋಜನೆ ಸ್ವರೂಪ ಹೇಗಿರಬೇಕೆಂದು ನರೇಂದ್ರ ಮೋದಿ ಸರ್ಕಾರ MyGov.in ಮೂಲಕ ಸಾರ್ವಜನಿಕರಿಂದಲೇ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಮೋದಿ ಸರ್ಕಾರ ಈ ಹೊಸ ಯೋಜನೆ ಗ್ರಾಮೀಣ ಭಾಗದ ಜನತೆಗೆ ಹೆಚ್ಚು ಉಪಯುಕ್ತವಾಗಲಿದೆ.