ವಾಷಿಂಗ್ಟನ್ : ಭಾರತ-ಅಮೆರಿಕ ಸಂಬಂಧ ದೃಢ-ವಿಶ್ವಾಸಾರ್ಹ ಮತ್ತು ನಿರಂತರದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ, ಉಭಯ ನಾಯಕರ ಜಂಟಿ ಸಂಪಾದಕೀಯ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟಗೊಂಡಿದ್ದು, ಭಾರತದಲ್ಲಿನ ಹೊಸ ಸರ್ಕಾರ ಸ್ಥಾಪಿತಗೊಂಡಿರುವ ಹಿನ್ನಲೆಯಲ್ಲಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ, ಪರಸ್ಪರ ಅರಿತುಕೊಳ್ಳುವ ಸಮಯವಾಗಿದೆ ಎಂದು ತಿಳಿಸಿದ್ದಾರೆ.
ಇದು ಸಾಂಪ್ರದಾಯಿಕ ಗುರಿಗಳಿಗಿಂತ ಹೆಚ್ಚಿನದಾಗಿದ್ದು, ಅದನ್ನು ತಲುಪಲು ಶಕ್ತಿಮೀರಿ ಯತ್ನಿಸುತ್ತೇವೆ. ಸಂಬಂಧ ವೃದ್ಧಿಯ ಆಶಯದೊಂದಿಗೆ ವ್ಯಾಪಾರ, ಹೂಡಿಕೆ, ತಂತ್ರಜ್ನಾನ ಮತ್ತು ಭಾರತದ ಅಭಿವೃದ್ಧಿ ಗುರಿಗಳಲ್ಲಿ ಭಾಗೀದಾರಿಕೆ, ಮತ್ತು ವಿಶ್ವದ ಅಭಿವೃದ್ಧಿಯಲ್ಲಿ ಅಮೆರಿಕದೊಂದಿಗೆ ಭಾಗಿಯಾಗಲು ಸಂಕಲ್ಪಿಸಲಾಗಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಇದರೊಂದಿಗೆ ರಕ್ಷಣೆ, ಗುಪ್ತಚರ, ಮಾಹಿತಿಗಳ ವಿನಿಮಯ, ಭಯೋತ್ಪಾದನೆ, ವಿರೋಧಿ ಹೋರಾಟ, ಕಾನೂನು ಸುವ್ಯವಸ್ಥೆ ಬಲಪಡಿಸುವುದು, ಸಮುದ್ರಮಾರ್ಗಗಳಲ್ಲಿ ನ್ಯಾಯಯುತ ವ್ಯಾಪಾರ ವಹಿವಾಟು ನಿರ್ವಹಣೆಗೂ ಪರಸ್ಪರ ಬದ್ಧವಾಗಿರುವುದಾಗಿ ಇಬ್ಬರು ನಾಯಕರೂ ಹೇಳಿದ್ದಾರೆ.
ಹಿಂದೆಂದಿಗಿಂತಲೂ ಉಭಯ ದೇಶಗಳ ಸಂಬಂಧ ಮತ್ತಷ್ಟು ಬೆಸೆಯುತ್ತಿದ್ದು, ಇದು ರಾಜ್ಯ, ಸ್ಥಳೀಯ ಮಟ್ಟಕ್ಕೂ ವ್ಯಾಪಿಸಿದೆ. ಅಲ್ಲದೇ ಇದು ಮಿಲಿಟರಿ, ಖಾಸಗಿ ವಲಯ ಮತ್ತು ನಾಗರಿಕ ಸಮುದಾಯಕ್ಕೂ ವೃದ್ಧಿಯಾಗಿದೆ ಎಂದು ಮೋದಿ-ಒಬಾಮ ಬರೆದಿದ್ದಾರೆ.
ಇದೇ ಮೋದಲಬಾರಿಗೆ ಪ್ರಧಾನಿ ಮೋದಿ- ಅಧ್ಯಕ್ಷ ಒಬಾಮ ಜಂಟಿ ಸಂಪಾದಕೀಯದ ಮೂಲಕ ಹೊಸ ಯತ್ನ ಮಾಡಲಾಗಿದ್ದು, ಸಂಬಂಧ ವೃದ್ಧಿಯ ವಿಶ್ವಾಸದೊಂದಿಗೆ ಹೊಸ ಗುರಿ ಇಟ್ಟುಕೊಳ್ಳಲಾಗಿದೆ.