ವಾಷಿಂಗ್ಟನ್ : ರಷ್ಯಾ-ಭಾರತ ಒಪ್ಪಂದದ ಬಗ್ಗೆ ಅಸಮಾಧಾನವಾಗಿದೆ ನಿಜ, ಆದರೆ ಅಧ್ಯಕ್ಷ ಒಬಾಮ ಭಾರತ ಭೇಟಿಯಲ್ಲಿ ಬದಲಾವಣೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ರಷ್ಯಾ ಜತೆಗಿನ ಬಾಂಧವ್ಯವನ್ನು ಮುಂದುವರಿಸುವುದಾಗಿ ಭಾರತ ಹೇಳಿರುವುದು ಅಮೆರಿಕಕ್ಕೆ ಅಸಮಾಧಾನ ತಂದಿದೆಯಾದರೂ ಭಾರತದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಅಮೆರಿಕಾಗೆ ಮನಸ್ಸಿಲ್ಲ. ಈ ನಿಟ್ಟಿನಲ್ಲಿ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡುವುದು ಖಚಿತ ಎಂದು ಅಮೆರಿಕ ತಿಳಿಸಿದೆ.
ಇತ್ತೀಚಿಗೆಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಭಾರತದೊಂದಿಗೆ ತೈಲ, ರಕ್ಷಣೆ, ಪರಮಾಣು ಶಕ್ತಿ ಸೇರಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಉಕ್ರೇನ್ ವಿಚಾರವನ್ನು ಮುಂದಿಟ್ಟುರೊಡು ಅಮೆರಿಕ, ಐರೋಪ್ಯ ಒಕ್ಕೂಟವು ಈಗಾಗಲೇ ರಷ್ಯಾಗೆ ನಿರ್ಬಂಧ ಹೇರಿವೆ. ಪರಿಸ್ಥಿತಿ ಹೀಗಿರುವಾಗ ಭಾರತವು ರಷ್ಯಾ ಜತೆ ಉತ್ತಮ ಸಂಬಂಧ ಕಾಯ್ದುಕೊಂಡಿರುವುದು ಅಮೆರಿಕಕ್ಕೆ ಅಸಮಾಧಾನ ಮೂಡಿಸಿದೆ.
ಜ.25, 26ರಂದು ಭಾರತ ಪ್ರವಾಸ ಕೈಗೊಳ್ಳುವ ವೇಳೆ ಬರಾಕ್ ಒಬಾಮ ಜಗತ್ ಪ್ರಸಿದ್ಧ ತಾಜ್ ಮಹಲ್‌ಗೂ ಭೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಅವರು ಐಟಿಐ ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಒಬಾಮ ಜತೆಗೆ ಪತ್ನಿ ಮಿಷಲ್ ಕೂಡಾ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆಯೇ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ.