ಬೀಜಿಂಗ್ : ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ವಿದೇಶಾಂಗ ಸಚಿವರು ನೀಡಿದ್ದ ಹೇಳಿಕೆ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದೆ.
ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೊ ಕಿಶಿದ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದ್ದರು. ಅಲ್ಲದೆ ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಕಾರಣವೇ ಇಲ್ಲದೆ ತಗಾದೆ ತೆಗೆದಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಚೀನಾ ವಿರೋಧ ವ್ಯಕ್ತಪಡಿಸಿದೆ.
ಅರುಣಾಚಲ ಪ್ರದೇಶದ ಬಗ್ಗೆ ಕಿಶಿದ ನೀಡಿರುವ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಚೀನಾ, ಜಪಾನ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ. ವಿದೇಶಾಂಗ ಸಚಿವರ ಹೇಳಿಕೆ ಬಗ್ಗೆ ಜಪಾನ್ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.
ಭಾರತ-ಚೀನಾ ನಡುವೆ ಇರುವ ಗಡಿ ವಿವಾದಗಳ ಸೂಕ್ಷ್ಮಗಳನ್ನು ಜಪಾನ್ ಸರ್ಕಾರ ಅರ್ಥಮಾಡಿಕೊಳ್ಳಲಿದ್ದು ಗಡಿ ವಿವಾದ ಇತ್ಯರ್ಥಗೊಳಿಸುವುದಕ್ಕಾಗಿ ಭಾರತ-ಚೀನಾದ ಪ್ರಯತ್ನವನ್ನು ಜಪಾನ್ ಗೌರವಿಸಲಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ, ಹಾಂಗ್ ಲೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.