ನವದೆಹಲಿ : ಭಾರತ ಅಮೆರಿಕಕ್ಕೆ ಬೆಸ್ಟ್ ಫ್ರೆಂಡ್, ವಿಜ್ನಾನ ತಂತ್ರಜ್ನಾನದಲ್ಲಿ ಭಾರತ ಹಾಗೂ ಅಮೆರಿಕ ಸಮಾನ ಸಾಮರ್ಥ್ಯ ಹೊಂದಿದೆ, ಭಾರತವನ್ನು ನೋಡಿದಾಗ ನಮ್ಮದೇ ಪ್ರತಿಬಿಂಬ ಕಾಣುತ್ತದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಜ.27ರಂದು ನವದೆಹಲಿಯಲ್ಲಿ ಸಿರಿಪೋರ್ಟ್ ಸಭಾಂಗಣದಲ್ಲಿ ನಲ್ಲಿ ವಿಶೇಷ ಆಮಂತ್ರಿತರನ್ನುದ್ದೇಶಿಸಿ ಮಾತನಾಡಿದ ಬರಾಕ್ ಒಬಾಮ, ಭಾರತ ಹಾಗೂ ಅಮೆರಿಕ ವಿಭಿನ್ನ ಸಂಸ್ಕೃತಿ ಹೊಂದಿದ್ದರೂ ಉಭಯ ದೇಶಗಳ ಗುರಿ ಒಂದೇ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರು ಅಮೆರಿಕಾದ ಜನತೆಯನ್ನು ಸಹೋದರ ಸಹೋದರಿಯರೆಂದಿದ್ದರು, ಇಂದು ನಾನು ಭಾರತೀಯರನ್ನು ಸಹೋದರ ಸಹೋದರಿಯರೆನ್ನಲು ಹೆಮ್ಮೆ ಪಡುತ್ತೇನೆ, ಸ್ವಾಮಿ ವಿವೇಕಾನಂದರು ಅಮೆರಿಕಾಗೆ ಹಿಂದುತ್ವ ಹಾಗೂ ಯೋಗವನ್ನು ಪರಿಚಯಿಸಿದರು, ಮಹಾತ್ಮ ಗಾಂಧಿ ಅಹಿಂಸೆಯನ್ನು ಪ್ರತಿಪಾದಿಸಿದ್ದರು. ನನಗೆ ಮಹಾತ್ಮಾ ಗಾಂಧಿ, ವಿವೇಕಾನಂದ, ಮಾರ್ಟೀನ್ ಲೂಥರ್ ಆದರ್ಶವಾಗಿದ್ದಾರೆ ಎಂದು ಒಬಾಮ ತಿಳಿಸಿದ್ದಾರೆ.
ಭಾರತ ಹಾಗೂ ಅಮೆರಿಕದ ಸಂಬಂಧ ವೃದ್ಧಿ ಈ ಶತಮಾನದ ಅದ್ಭುತ ಸಾಧನೆ, ಉಭಯ ದೇಶಗಳ ನಡುವೆ ಸಂಬಂಧ ವೃದ್ಧಿ ಸ್ನೇಹದ ಪ್ರತೀಕ ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ಹಾಗು ಭಾರತ ಸಮಾನ ಗುರಿ ಹೊಂದಿದ ದೇಶಗಳಾಗಿವೆ, ಜಾಗತಿಕ ಮಟ್ಟದಲ್ಲಿ ಬಡತನ ನಿವಾರಣೆಗೆ ಭಾರತ ಮತ್ತು ಅಮೆರಿಕ ಶ್ರಮಿಸಲಿವೆ. ಬಡತನ ನಿರ್ಮೂಲನೆಯಲ್ಲಿ ಭಾರತ ಜಗತ್ತಿಗೇ ದಾರಿದೀಪವಾಗಲಿದೆ. ಭಾರತದ ಯುವ ಜನತೆಗೆ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಒಬಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆ ಜಾಗತಿಕ ಪಿಡುಗಾಗಿದ್ದು, ಉಗ್ರವಾದದ ವಿರುದ್ಧ ಹೋರಾಡಲು ಭಾರತ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ, ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಲು ಬೆಂಬಲ ನೀಡುತ್ತೇವೆ, ಭದ್ರತಾ ಮಂಡಳಿಯಲ್ಲಿ ಭಾರತದ ಅವಶ್ಯಕತೆ ಇದೆ ಎಂದು ಒಬಾಮ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ 'ಬೇಟಿ ಬಚಾವೊ ಬೇಟಿ ಪಡಾವೋ' ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಒಬಾಮ, ಮಹಿಳೆಯರು ಸಬಲರಾದರೆ ದೇಶವೂ ಅಭಿವೃದ್ಧಿಯಾಗುತ್ತದೆ. ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ನೀಡಬೇಕಿದೆ. ನಿನ್ನೆ ನಡೆದ ಮಹಿಳಾ ಅಧಿಕಾರಿಗಳ ಪರೇಡ್ ನಿಜಕ್ಕೂ ಅದ್ಭುತವಾಗಿತ್ತು. ಭಾರತೀಯ ಸೇನೆಯನ್ನು ನೋಡಿದರೆ ಇಲ್ಲಿ ಮಹಿಳೆಯರಿಗೆ ನೀಡುವ ಪ್ರಾಶಸ್ತ್ಯದ ಬಗ್ಗೆ ತಿಳಿಯುತ್ತದೆ. ಜಗತ್ತಿನ ಎಲ್ಲಾ ಮಹಿಳೆಯರಿಗೂ ಇಂತಹ ಅವಕಾಶ ಸಿಗಬೇಕೆಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಭಾರತದೊಂದಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಒಪ್ಪಂದಗಳು ನಡೆಯಲಿದ್ದು ಭಾರತದೊಂದಿಗಿನ ಸಂಬಂಧ ವೃದ್ಧಿಯೇ ತಮ್ಮ ಪ್ರಥಮ ಆದ್ಯತೆ ಎಂದು ಒಬಾಮ ತಿಳಿಸಿದ್ದಾರೆ.