ಬೀಜಿಂಗ್ : ಅಚ್ಚರಿಯ ಬೆಳವಣಿಗೆಯಲ್ಲಿ, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯ ಸ್ಥಾನ ನೀಡಲು ಚೀನಾ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕಾದ ನಂತರ ಚೀನಾದ ಬೆಂಬಲ ಭಾರತಕ್ಕೆ ದೊರೆತಿದೆ.
ಪ್ರಧಾನಿ ನರೇಂದ್ರ ಮೋದಿ ಸದ್ಯದಲ್ಲೇ ಚೀನಾ ಪ್ರವಾಸ ಕೈಗೊಳ್ಳಲಿದ್ದು ಇದಕ್ಕೂ ಮುನ್ನ ಚೀನಾ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯ ಸ್ಥಾನ ನೀಡುವುದಕ್ಕೆ ಬೆಂಬಲಿಸುವುದಾಗಿ ಘೋಷಿಸಿದೆ.
ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ, ಸಹ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೆಂಬಲ ಘೋಷಿಸಿದ್ದರು. ಭಾರತ ಮತ್ತು ಬ್ರೆಜಿಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಯತ್ನಿಸುತ್ತಿವೆ. ಆದರೆ, ಇದೇ ರೀತಿ ಭದ್ರತಾ ಮಂಡಳಿ ಕಾಯಂ ಸದಸ್ಯನಾಗಲು ಬಯಸುತ್ತಿರುವ ಜಪಾನ್ ಕುರಿತು ಮಾತ್ರ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರೆಗೂ ಭಾರತದ ವಿರುದ್ಧದ ಧೋರಣೆಗಳನ್ನೇ ಅನುಸರಿಸುತ್ತಿದ್ದ ಚೀನಾ, ಗಡಿ ವಿವಾದ ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ತನ್ನ ನಿಲುವು ಬದಲಿಸಲು ಪ್ರಾರಂಭಿಸಿದೆ. ತನ್ನ ಅರ್ಥ ವ್ಯವಸ್ಥೆಯನ್ನೂ ಹಿಂದಿಕ್ಕುತ್ತಿರುವ ಭಾರತದ ಅರ್ಥವ್ಯವಸ್ಥೆ, ಮತ್ತೊಂದೆಡೆ ಮೋದಿ ಸರ್ಕಾರ ವಿಶ್ವಮಟ್ಟದಲ್ಲಿ ಪ್ರಭಾವಿಯಾಗಿರುವುದರಿಂದ ವಿಚಲಿತವಾಗಿರುವ ಚೀನಾ ತನ್ನ ನಿಲುವು ಬದಲಿಸಿಕೊಳ್ಳಲು ಮುಂದಾಗಿದೆ.