ನವದೆಹಲಿ : ಉಗ್ರರನ್ನು ಹೊಗಳಿ ಹೇಳಿಕೆ ನೀಡಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಹೇಳಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮ ಸರ್ಕಾರ ಭಯೋತ್ಪಾದನೆ, ಉಗ್ರವಾದವನ್ನು ಎಂದಿಗೂ ಸಹಿಸುವುದಿಲ್ಲ, ಅಂತೆಯೇ ಉಗ್ರರನ್ನು ಹೊಗಳಿ ನೀಡಿರುವ ಹೇಳಿಕೆಯನ್ನೂ ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ದಿನದಂದೇ ಸಿ.ಎಂ ಮುಫ್ತಿ ಮೊಹಮದ್ ಈ ರೀತಿ ಹೇಳಿಕೆ ನೀಡಿದ್ದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ತೀವ್ರ ಮುಜುಗರ ಉಂಟಾಗಿತ್ತು. ಮೈತ್ರಿ ಪಕ್ಷ ಪಿಡಿಪಿ ಮುಖಂಡನ ಹೇಳಿಕೆಗೆ ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.
ಮುಫ್ತಿ ಮೊಹಮದ್ ಸಯೀದ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡುವ ನಿರೀಕ್ಷೆ ಇತ್ತು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದು, ಜಮ್ಮು-ಕಾಶ್ಮೀರದ ಅಭಿವೃದ್ಧಿ ಮಾತ್ರ ತಮ್ಮ ಗುರಿ, ಇಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಅಲ್ಲದೇ ಮುಫ್ತಿ ಮೊಹಮದ್ ಹೇಳಿಕೆಯನ್ನು ತಳ್ಳಿಹಾಕಿರುವ ಮೋದಿ, ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆಯಲು ಕಾರಣ ಅಲ್ಲಿನ ಜನತೆಯೇ ಹೊರತು ಉಗ್ರರಾಗಲೀ,ಪಾಕಿಸ್ತಾನವಾಗಲಿ ಅಲ್ಲ ಎಂದಿದ್ದಾರೆ.