ಒಟ್ಟಾವಾ : 42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರ ಕೆನಡಾ ಪ್ರವಾಸ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೆನಡಾಗೆ ಆಗಮಿಸಿ ಯುರೇನಿಯಂ ಖರೀದಿ ಸೇರಿದಂತೆ 13 ಒಪ್ಪಂದ ಮಾಡಿಕೊಂಡಿದ್ದಾರೆ.
ಫ್ರಾನ್ಸ್ ಮತ್ತು ಜರ್ಮನಿ ದೇಶಗಳ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ ಅಂತಿಮ ಭಾಗವಾಗಿ ಕೆನಡಾಕ್ಕೆ ಭೇಟಿ ನೀಡಿದ್ದು, ಸಮಗ್ರ ಮಾತುಕತೆಯ ಬಳಿಕ ಉಭಯ ದೇಶಗಳ ನಡುವೆ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಸಹಿ ಹಾಕಿದ್ದಾರೆ.
ಒಪ್ಪಂದದ ಪ್ರಕಾರ ಕೆನಡಾ ಈ ವರ್ಷದಿಂದಲೇ ಭಾರತಕ್ಕೆ ಯುರೇನಿಯಂ ಪೂರೈಕೆ ಆರಂಭಿಸಲಿದ್ದು, 5 ವರ್ಷಗಳ ಅವಧಿಯಲ್ಲಿ ಒಟ್ಟು 3,000 ಮೆಟ್ರಿಕ್ ಟನ್ಗಳಷ್ಟು ಯುರೇನಿಯಂ ಅನ್ನು ಒದಗಿಸಲಿದೆ. ಇದರ ಖರೀದಿಗೆ ಭಾರತ 1524 ಕೋಟಿ ರೂ.ಗಳನ್ನು ವೆಚ್ಚಮಾಡಲಿದೆ. ಈ ನಿರ್ಧಾರವನ್ನು ದ್ವಿಪಕ್ಷೀಯ ಸಹಕಾರದಲ್ಲಿ ಹೊಸ ಅಧ್ಯಾಯವೊಂದರ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಭಯ ದೇಶಗಳು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ 13 ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದಗಳು ಭಾರತದ ಯುವಕರ ಸಬಲೀಕರಣಕ್ಕೆ ನನ್ನ ಬದ್ಧತೆ ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ಸಹಕಾರಕ್ಕೆ ಸಂಬಂಧಿಸಿದಂತೆ ಮತಾನಾಡಿದ ಮೋದಿ, ಉಭಯ ದೇಶಗಳು ಆಧುನಿಕ ತಂತ್ರಜ್ಞಾನ ಸಹಕಾರ ಹೊಂದುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಅಲ್ಲದೇ ಎರಡು ದೇಶಗಳ ನಡುವೆ ಜನರ ಸಂಪರ್ಕವನ್ನು ಬೆಸೆಯಲು ನಾವು ವೀಸಾ ಯೋಜನೆಯನ್ನು ಸರಳಗೊಳಿಸಿದ್ದೇವೆ. ಕೆನಡಾ ದೇಶದ ಪ್ರಜೆಗಳಿಗೆ ಭಾರತ ಪ್ರವಾಸ ಕೈಗೊಳ್ಳಲು ಇ ವೀಸಾ ಸೌಲಭ್ಯ ನೀಡಲಾಗುವುದು. ಅವರು 10 ವರ್ಷಗಳ ಕಾಲ ವೀಸಾ ಅವಧಿಯನ್ನು ವಿಸ್ತರಿಸಬಹುದು ಎಂದು ಪ್ರಕಟಿಸಿದ್ದಾರೆ.