ಬೀಜಿಂಗ್ : ಇಂದಿನಿಂದ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಕ್ಸಿಯಾನ್ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಚೀನಾದ ಸಾಂಪ್ರದಾಯಿಕ ಡ್ರ್ಯಾಗನ್ ನೃತ್ಯದ ಮೂಲಕ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ತವರೂರಾಗಿರುವ ಐತಿಹಾಸಿಕ ನಗರಿ ಕ್ಸಿಯಾನ್ ಗೆ ನೇರವಾಗಿ ತೆರಳಿದ ಪ್ರಧಾನಿ ಮೋದಿ, ಅಲ್ಲಿ ಟೆರ್ರಾಕೋಟಾ ಐತಿಹಾಸಿಕ ಯುದ್ಧ ವಸ್ತುಸಂಗ್ರಹಾಯಲಯಕ್ಕೆ ಭೇಟಿ ನೀಡಿದರು.
ಚೀನಾದ ಮೊದಲ ರಾಜ ಕ್ಸಿ ಹುವಾಂಗ್ ಸೇನೆಯ ಕಲಾಕೃತಿಗಳು, 6೦೦ಕ್ಕೂ ಹೆಚ್ಚು ಕುದುರೆಗಳು, 8೦೦ಕ್ಕೂ ಹೆಚ್ಚು ಸೈನಿಕರ ಶಿಲ್ಪಕಲಾಕೃತಿಗಳು, 14೦ಕ್ಕೂ ಹೆಚ್ಚು ರಥಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಅಲ್ಲಿನ ವಿಸಿಟರ್ಸ್ ಬುಕ್ ನಲ್ಲಿ ಸಂದೇಶ ಬರೆದರು.
ಬಳಿಕ ಚೀನಾದ ಅತ್ಯಂತ ಪ್ರಾಚೀನ ಬೌದ್ಧ ದೇವಾಲಯಗಳಲ್ಲಿ ಒಂದಾಗಿರುವ ಡಾ.ಕ್ಸಿಂಗ್ ಶಾನ್ ಟೆಂಪಲ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ದೇವಾಲಯ ವೀಕ್ಷೆಣೆ ಮಾಡಿದ ಅವರು, ದೇವಾಲಯದಲ್ಲಿ ವಿಗ್ರಹಗಳಿಗೆ ನಮನ ಸಲ್ಲಿಸಿದರು.
2ನೇ ಶತಮಾನದಲ್ಲಿ ಕಿಂಗ್ ವಂಶಸ್ಥರು ಈ ದೇವಾಲಯವನ್ನು ಕಟ್ಟಿದ್ದರು ಎನ್ನಲಾಗಿದೆ. ಇಲ್ಲಿ ಪ್ರಮುಖ ಬೌಧ್ಧ ಬಿಕ್ಕು ಜತೆ ಪ್ರಧಾನಿ ಮಾತುಕತೆ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ನೋಡಲು ಜನಸಾಗರವೇ ಹರಿದುಬಂದಿತ್ತು. ನೆರೆದಿದ್ದ ಚೀನಿ ಜನಗಳತ್ತ ಕೈಬೀಸಿ ಅಭಿನಂದಿಸಿದರು.