ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಮುಖ 10 ನಾಯಕರಲ್ಲಿ ಒಬ್ಬರಾಗಿದ್ದಾರೆ, ಜಾಗತಿಕ ವೇದಿಕೆಯಲ್ಲಿ ಅವರನ್ನು ಗುರುತಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಭಾರತವನ್ನು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತಿದೆ. ಮೋದಿ ಅವರಿಗೆ ಇತರೆ ದೇಶಗಳು ಒಂದರ ಹಿಂದೆ ಒಂದು ಕೆಂಪು ಹಾಸಿನ ಸ್ವಾಗತ ನೀಡುತ್ತಿವೆ. ಅವರು ಈಗ ವಿಶ್ವದ ಪ್ರಮುಖ 10 ನಾಯಕರಲ್ಲಿ ಒಬ್ಬರು ಹೀಗಿರುವಾಗ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಕೀಳಾಗಿ ಮಾತನಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಆರ್ಥಿಕತೆ ಅಭಿವೃದ್ಧಿಗಾಗಿ ಹಾಗೂ ರಾಜತಾಂತ್ರಿಕ ಸಂಬಂಧ ವೃದ್ಧಿಗಾಗಿ ಪ್ರಧಾನಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಈ ಬಗ್ಗೆ ವಿಪಕ್ಷಗಳು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರತಕ್ಕೆ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಮತ್ತು ವಿಶ್ವಸಂಸ್ಥೆ 'ಯೋಗ ಅಂತಾರಾಷ್ಟ್ರಿಯ ದಿನ' ಘೋಷಿಸಿರುವುದು ಜಾಗತಿಕ ವೇದಿಕೆಯಲ್ಲಿ ಮೋದಿ ಅವರ ಸಲಹೆಗಳನ್ನು ಸ್ವೀಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.