ನವದೆಹಲಿ : ಜವಳಿ ಇಲಾಖೆಗೆ ವರ್ಗಾವಣೆಗೊಂಡಿರುವ ಸಚಿವೆ ಸ್ಮೃತಿ ಇರಾನಿ ಅವರು ನೂತನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಶುಭ ಕೋರಿದ್ದಾರೆ.
ಇದೇ ವೇಳೆ ‘ರಾಷ್ಟ್ರದ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
‘ಕಳೆದ ಎರಡು ವರ್ಷಗಳಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಶಿಕ್ಷಣದ ಗುಣಮಟ್ಟ ಸುಧಾರಣೆ, ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಂಡಿದೆ. ಸಚಿವಾಲಯವು ಕಳೆದೆರಡು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸುವುದಾಗಿ ಹೇಳಿರುವ ಪ್ರಕಾಶ ಜಾವಡೇಕರ್ ಅವರಿಗೆ ಶುಭಾಶಯಗಳನ್ನು ಕೋರುವೆ’ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಅಧಿಕಾರಿಗಳಿಗೂ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ ‘ನಮ್ಮ ರಾಷ್ಟ್ರದ ಅತ್ಯಂತ ಮಹತ್ವದ ಜವಳಿ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜವಳಿ ಸಚಿವಾಲಯದ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಕಾತರಳಾಗಿದ್ದೇನೆ’ ಎಂದು ಹೇಳಿದ್ದಾರೆ.