ವಾಷಿಂಗ್ ಟನ್ : 'ಅಮೆರಿಕ' ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ಬಗ್ಗೆ ಚೀನಾ ಪ್ರತಿಕ್ರಿಯೆಗಳಿಗೆ ಉತ್ತರಿಸಿರುವ ಬರಾಕ್ ಒಬಾಮ, ಚೀನಾಗೆ ಅಭಯ ನೀಡಿದ್ದಾರೆ.
ಭಾರತ ಹಾಗೂ ಅಮೆರಿಕದ ಸೌಹಾರ್ದಯುತ ಸಂಬಂಧದಿಂದ ಚೀನಾ ಹೆದರುವ ಅವಶ್ಯಕತೆ ಇಲ್ಲ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ. ಸಿ.ಎನ್.ಎನ್ ವಾಹಿನಿಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಚೀನಾ ಬಗ್ಗೆ ಪ್ರಸ್ತಾಪಿಸಿರುವ ಒಬಾಮ, ಕಳೆದ ನವೆಂಬರ್ ನಲ್ಲಿ ತಾವು ಕೈಗೊಂಡಿದ್ದ ಚೀನಾ ಪ್ರವಾಸದ ಬಗ್ಗೆ ಹೇಳಿದ್ದು ಯಶಸ್ವಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ದೇಶದ ಜನರ ಅಭಿವೃದ್ಧಿಯನ್ನು ಬಯಸುವ ಎಲ್ಲಾ ದೇಶಗಳೊಂದಿಗೂ ಸೌಹಾರ್ದಯುತ ಸಂಬಂಧ ಮುಂದುವರೆಸುವ ಮೂಲಕ win-win formula(ಯಾರಿಗೂ ನಷ್ಟವಾಗದಂತಹ) ವಾತಾವರಣ ನಿರ್ಮಿಸುವುದು ತಮ್ಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಗುರಿ ಎಂದು ಬರಾಕ್ ಒಬಾಮ ಹೇಳಿದ್ದಾರೆ. ಚೀನಾ ಅಭಿವೃದ್ಧಿಯಾದರೆ ಅಮೆರಿಕಾಗೂ ಒಳಿತು, ಚೀನಾ ದುರ್ಬಲವಾದರೆ ಅದು ಅಮೆರಿಕಾಗೂ ಮಾರಕ ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ವಿಯೆಟ್ನಾಂ, ಫಿಲಿಪೇನ್ಸ್ ನಂತಹ ಸಣ್ಣ ರಾಷ್ಟ್ರಗಳನ್ನು ಬೆದರಿಸುವ ಮೂಲಕ ಚೀನಾ ಅಭಿವೃದ್ಧಿ ಸಾಧಿಸುವುದನ್ನು ತಾವು ಅಧಿಕಾರ ವಹಿಸಿಕೊಂಡಾಗಿನಿಂದಲೂ ವಿರೋಧಿಸುತ್ತಿರುವುದಾಗಿ ಇದೇ ವೇಳೆ ಒಬಾಮ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕದ ಸಂಬಂಧವನ್ನು ವೃದ್ಧಿಗೊಳಿಸುವಂತಹ ಅನೇಕ ವಿಷಯಗಳು ಭಾರತದಲ್ಲಿವೆ. ಭಾರತದ ಪ್ರಜಾಪ್ರಭುತ್ವ, ಅಲ್ಲಿನ ಮೌಲ್ಯಗಳು ಮತ್ತು ಆಕಾಂಕ್ಷೆಗಳು ನಮ್ಮ ದೇಶದ ಪ್ರತಿಬಿಂಬವಿದ್ದಂತಿವೆ. ಆದರೆ ಅದ್ಯಾವುದನ್ನೂ ಚೀನಾದಲ್ಲಿ ನೋಡಲು ಸಾಧ್ಯವಿಲ್ಲ, ಆದ್ದರಿಂದ ಭಾರತ ನಮ್ಮನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ಒಬಾಮ ಹೇಳಿದ್ದಾರೆ.