ಮುಂಬೈ : 2005ನೇ ಇಸವಿಗೆ ಮೊದಲು ಮುದ್ರಣಗೊಂಡಿದ್ದ 500, 1000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಇನ್ನು ಹತ್ತು ದಿನ ಮಾತ್ರ ಅವಕಾಶವಿದೆ. ಹಳೆ ನೋಟುಗಳನ್ನು ಬ್ಯಾಂಕಿಗೆ ನೀಡಿ ಹೊಸ ನೋಟು ಪಡೆಯಲು ಜೂ.30 ಕಡೆಯ ದಿನವಾಗಿದೆ.
2005ಕ್ಕೆ ಮುಂಚಿನ ಕರೆನ್ಸಿಗಳ ಚಲಾವಣೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಕೋರಿರುವ ರಿಸರ್ವ್ ಬ್ಯಾಂಕ್, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಳೆ ನೋಟುಗಳನ್ನು ಠೇವಣಿಯಿರಿಸಿ ಅಥವಾ ತಮ್ಮ ಹತ್ತಿರದ ಅನುಕೂಲಕರ ಬ್ಯಾಂಕ್ ನಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಕೋರಿದೆ.
ಹಳೆಯ ನೋಟುಗಳೆಲ್ಲವೂ ಕಾನೂನು ರೀತ್ಯಾ ಬಿಡುಗಡೆಗೊಂಡಿದ್ದು, ಗ್ರಾಹಕರು ತಾವು ನೀಡಿದ ನೋಟಿಗೆ ಅಷ್ಟೇ ಬೆಲೆಯ ಹೊಸ ನೋಟುಗಳನ್ನು ಪಡೆಯಬಹುದು.
ಹಳೆ ನೋಟುಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ನೋಟುಗಳ ಹಿಂಬದಿಯಲ್ಲಿ ಯಾವ ವರ್ಷದಲ್ಲಿ ಮುದ್ರಣವಾಗಿದ್ದು ಎಂಬುದಿರುವುದಿಲ್ಲ. 2005ರ ನಂತರ ಪ್ರಕಟಗೊಂಡ ನೋಟುಗಳ ಹಿಂಬದಿಯ ಕೆಳಭಾಗದಲ್ಲಿ ಮುದ್ರಣಗೊಂಡ ವರ್ಷ ಪ್ರಕಟಗೊಂಡಿರುತ್ತದೆ.
ನಕಲಿ ನೋಟುಗಳ ಹಾವಳಿ ತಪ್ಪಿಸಲು ಭದ್ರತೆ ದೃಷ್ಠಿಯಿಂದ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಆರ್.ಬಿ.ಐಯ ಸ್ಥಳೀಯ ಕಚೇರಿಯಲ್ಲಿ ಜನವರಿಯವರೆಗೆ 164 ಕೋಟಿ ಹಳೆ ನೋಟುಗಳನ್ನು ಹರಿದು ಹಾಕಲಾಗಿದೆ. ಚಲಾವಣೆಯಿಂದ ತೆಗೆದುಹಾಕಿರುವ ನೋಟುಗಳ ಬೆಲೆ ಮಾರ್ಚ್ ವರೆಗೆ 21 ಸಾವಿರದ 750 ರೂಪಾಯಿಗಳಷ್ಟಾಗಿದೆ ಎಂದು ಆರ್.ಬಿ.ಐ ತಿಳಿಸಿದೆ.